ಜಬೋರ್ಯಾಂಡಿ 

 	ಬೆವರು ಮತ್ತು ಲಾಲಾರಸಗಳ ಅಧಿಕ ಸ್ರಾವವನ್ನು ಉಂಟು ಮಾಡಲು ಬ್ರಜಿûಲ್ ಪೆರು ಮುಂತಾದ ದಕ್ಷಿಣ ಅಮೆರಿಕ ಪ್ರದೇಶಗಳಲ್ಲಿನ ಜನ ಉಪಯೋಗಿಸುತ್ತಿದ್ದ ಒಂದು ಮೂಲಿಕೆ. 1837ರಲ್ಲಿ  ಈ ಸಸ್ಯವನ್ನು ಯೂರೋಪಿಗೆ ತಂದು ಬೆಳೆಸಲಾಯಿತು. 1875ರಲ್ಲಿ ಜಬೋರ್ಯಾಂಡಿ ಎಂಬ ಹೆಸರಿನಲ್ಲಿ ಇದರ ಉತ್ಪನ್ನವಾದ ಒಂದು ಔಷಧ ವಸ್ತು ಯೂರೋಪು ಇಂಗ್ಲೆಂಡುಗಳಲ್ಲಿ ಬಳಕೆಗೆ ಬಂತು. ಆಗ ಈ ಗಿಡದ ಶಾಸ್ತ್ರೋಕ್ತವಾದ ಹೆಸರು ಗೊತ್ತಿರಲಿಲ್ಲ. ಅನಂತರ ಅದು ರೂಟೇಸೀ ಕುಟುಂಬಕ್ಕೆ ಸೇರಿದ ಪೈಲೋಕಾರ್ಪಸ್ ಜಾತಿಯ ಸಸ್ಯ-ಪೈ.ಜಬೊರ್ಯಾಂಡಿ (ಪೈ.ಪೆನ್ನೇಟಿಫೋಲಿಯಸ್) ಎಂದು ತಿಳಿಯಿತು. ಇದು ನಿಂಬೆ, ಹರಳು ಗಿಡಗಳಂತೆ ಸುಮಾರು 3 ಮೀಟರ್ ಎತ್ತರ ಬೆಳೆಯುವ ದೃಢಕಾಯವಾದ ಕುರುಚಲುಗಿಡ. ಇದರ ಒಣಗಿದ ಎಲೆಗಳ ಚೂರ್ಣವೇ ಜಬೊರ್ಯಾಂಡಿ. ಹಸಿಎಲೆಗಳನ್ನು ಹಿಸುಕಿದರೆ ಒಂದು ವಿಶಿಷ್ಟಕಂಪು ಸೂಸುತ್ತದೆ. ಅಗಿದರೆ ಕಹಿ ಹಾಗೂ ತಿಕ್ತ ಅನುಭವ ಉಂಟಾಗಿ ಶೀಘ್ರದಲ್ಲಿ ಅತಿಯಾಗಿ ಜೊಲ್ಲು ಸ್ರವಿಸುವುದು.

     ಜಬೊರ್ಯಾಂಡಿಯಲ್ಲಿ ಪೈಲೋಕಾರ್ಪಿನ್ ಎಂಬ ದ್ರವರೂಪ ಕ್ಷಾರವಸ್ತು (ಆಲ್‍ಕಲಾಯ್ಡ್) ಸುಮಾರು 0.5%ರಷ್ಟು ಉಂಟು. ಇದೇ ಜಬೊರ್ಯಾಂಡಿಯ ಕಾರ್ಯನಿರ್ವಾಹಕ ಘಟಕ. ಹೆಚ್ಚು ಪ್ರಮಾಣದಲ್ಲಿ ನೀರಿನೊಡನೆ ಮಿಶ್ರವಾಗಲಾರದಾದರೂ ಮದ್ಯಸಾರ, ಈಥರ್, ಕ್ಲೋರೊಫಾರಮ್ ಮುಂತಾದ ದ್ರವಗಳೊಡನೆ ಪೈಲೋಕಾರ್ಪಿನ್ ಧಾರಳವಾಗಿ ಮಿಶ್ರವಾಗುತ್ತದೆ. ಆಮ್ಲಗಳೊಡನೆ ಅನುಗುಣವಾದ ಲವಣಗಳು ಫಲಿಸುವುವು. ಜಬೊರ್ಯಾಂಡಿಯಲ್ಲಿ ಪೈಲೋಕಾರ್ಪಿನ್ ಅಲ್ಲದೆ ಇನ್ನೂ ಎರಡುಮೂರು ಕ್ಷಾರವಸ್ತುಗಳು ಅಲ್ಪಪ್ರಮಾಣದಲ್ಲಿ ಇರುತ್ತವೆ. ಅವುಗಳಲ್ಲಿ ಜಬರೈನ್ ಎಂಬುದು ಮುಖ್ಯ. ದೇಹದಲ್ಲಿ ಇದರ ವರ್ತನೆ ಅಟ್ರೋಪಿನ್ನಿನ ವರ್ತನೆಯಂತೆಯೇ. ಅರ್ಥಾತ್ ಪೈಲೋಕಾರ್ಪಿನ್ ಉಂಟುಮಾಡುವ ಪರಿಣಾಮಗಳಿಗೆ ವಿರುದ್ಧ ಪರಿಣಾಮಗಳನ್ನು ಜಬರೈನ್ ಉಂಟು ಮಾಡುತ್ತದೆ. ಜಬರೈನ್ ಗಣನೀಯ ಪ್ರಮಾಣದಲ್ಲಿದ್ದರೆ ಪೈಲೋಕಾರ್ಪಿನ್ ಜಬರೈನುಗಳ ಪರಸ್ಪರ ವಿರುದ್ಧ ಪರಿಣಾಮಗಳ ಉಳಿಕೆಯಾಗಿ ಜಬೊರ್ಯಾಂಡಿಯ ಕಾರ್ಯ ದೇಹದಲ್ಲಿ ಏನಾಗಿರುತ್ತದೆ ಎಂಬುದು ಅನಿಶ್ಚಿತ. ಈ ಕಾರಣದಿಂದಲೂ ಪೈಲೋಕಾರ್ಪಿನ್ನನ್ನು ಸುಲಭವಾಗಿ ಪಡೆಯಬಹುದಾದ್ದರಿಂದಲೂ ಜಬೊರ್ಯಾಂಡಿಯ ಬದಲು ಪೈಲೋಕಾರ್ಪಿನ್ನಿನ ಉಪಯೋಗ ಬಳಕೆಗೆ ಬಂದಿದೆ. ಬೆವರಿ ಜ್ವರ ಇಳಿಯುವಂತೆ ಮಾಡಲೂ ಕಣ್ಣಿನ ಪಾಪೆಯನ್ನು ಕಿರಿದುಮಾಡಲೂ ಪೈಲೋಕಾರ್ಪಿನ್ ನೈಟ್ರೇಟನ್ನು ಉಪಯೋಗಿಸುತ್ತಾರೆ. ತಲೆಕೂದಲು ಉದುರಿ ಬೋಳಾಗಿದ್ದಾಗ ಜಬೊರ್ಯಾಂಡಿ ಟಿನ್‍ಕ್ಚರನ್ನು ಲೇಪಿಸಿ ನೀವುತ್ತ ಬಂದರೆ ಕೂದಲು ಪುನಃ ಹುಟ್ಟುವ ಸಂಭವ ತಕ್ಕಮಟ್ಟಿಗೆ ಇದೆ. ಈಚೆಗೆ ಈ ಸ್ಥಿತಿಗೂ ಪೈಲೋಕಾರ್ಪಿನ್ ನೈಟ್ರೇಟ್ ದ್ರಾವಣವನ್ನು ಉಪಯೋಗಿಸುತ್ತಾರೆ. 							(ನೋಡಿ- ಪೈಲೋಕಾರ್ಪಿನ್)
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ